Monday, 29 April 2019

ಸಹಕಾರ ರತ್ನ ಡಿ ಟಿ ಪಾಟೀಲ ಕರಗಾಂವ(D. T. Patil karagaon) - ಸಂಕ್ಷಿಪ್ತ ಪರಿಚಯ.Brief Introduction

 ಸಹಕಾರ ರತ್ನ ಡಿ ಟಿ ಪಾಟೀಲ ಕರಗಾಂವ - ಸಂಕ್ಷಿಪ್ತ ಪರಿಚಯ

ಸಹಕಾರ ರತ್ನ, ಬಡವರ ಬಂದು, ರಾಜಕೀಯ ಗುರು, ಹೀಗೆ ಅವರನ್ನು ಕರೆಯಲು ಯಾವ ದೇಶದ ಶಬ್ದಕೋಶ ಬಳಸಿದರೂ ಕಡಿಮೆಯೇ. ನೇರ ನುಡಿ, ಕಡಿಮೆ ಮಾತು, ಹೆಚ್ಚಿನ ಕೆಲಸ, ಬಡವರ ಕಾಳಜಿ, ರೈತರ ಸ್ನೇಹ ಜೀವಿ ಎಂದೇ ಖ್ಯಾತಿಯಾದ ಒಂದು ವ್ಯಕ್ತಿತ್ವ, ವಯಸ್ಸಿನಲ್ಲಿ ಹಿರಿಯರಿದ್ದರೂ ಕಿರಿಯರಂತೆ ಚುರುಕುತನ, ಚಿಕ್ಕವರಿಂದ ದೊಡ್ಡವರ ವರೆಗೆ ಬೇಧ ಭಾವ ಇಲ್ಲದೆಎಲ್ಲರನ್ನೂ ಮಾತನಾಡಿಸುವ ಗುಣ, ಸಂಕಷ್ಟಕ್ಕೆ ಸಿಲುಕಿದವರ ಬಾಳಿಗೆ ಆಶಾಕಿರಣ, ಸಹಕಾರ ರಂಗಕ್ಕೆ ಹೇಳಿಮಾಡಿಸಿದ ವ್ಯಕ್ತಿತ್ವ ಇಷ್ಟು ಹೇಳಿದ ಮೇಲೆ ಎಲ್ಲರಿಗೂ ಗೊತ್ತಾಗಿರುವ ವ್ಯಕ್ತಿತ್ವ. ಅವರ ಪರಿಚಯ ಮಾಡಿಕೊಳ್ಳಲು ನಂಗೆ ತುಂಬಾ ಸಂತೋಷ ಅನಿಸುತ್ತದೆ.

ಡಿ ಟಿ ಪಾಟೀಲ ಕರಗಾಂವ ಅವರ ಪ್ರಾರಂಭಿಕ ಜೀವನ -
ದೇಶ ಒಂದು ಕಡೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟದ ಅಂತಿಮ ಹಂತದಲ್ಲಿರುವ ಸಂದರ್ಭದಲ್ಲಿ ಡಿ ಟಿ ಪಾಟೀಲರು  ಹುಟ್ಟಿದ್ದು 04-08-1936 ರಂದು  ಮಹಾರಾಷ್ಟ್ರದ ಹಲಸವಾಡಿ ಎಂಬಲ್ಲಿ ಜನಿಸುತ್ತಾರೆ. ತಂದೆ ತಮ್ಮನಗೌಡರು ಸ್ವಾತಂತ್ರ್ಯ  ಹೋರಾಟಗಾರು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಕರಗಾಂವ, ಚಿಕ್ಕೋಡಿ ಭಾಗದಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿತ್ವ.  ಡಿ ಟಿ ಪಾಟೀಲರ ಪೂರ್ಣ ಹೆಸರು ದೇವೇಗೌಡ ತಮ್ಮನಗೌಡ ಪಾಟೀಲ. ಆದರೆ ಇವರು ಡಿ ಟಿ ಪಾಟೀಲ ಎಂದೇ ಪ್ರಸಿದ್ಧರು. ಡಿ ಟಿ ಪಾಟೀಲರೊಂದಿಗೆ ಕರಗಾಂವ ಗ್ರಾಮದ ಹೆಸರು ಜನಪ್ರಿಯ. ಇವರಿಗೆ ಡಿ ಟಿ ಪಾಟೀಲ ಕರಗಾಂವ ಎಂದೆ ಕರೆಯುತ್ತಾರೆ. ಗ್ರಾಮಸ್ಥರು ಮಹಾದೇವ ಗೌಡರೆಂದೂ ಕರೆಯುತ್ತಾರೆ. ಕೆಲವರು ಡಿ ಟಿ ಎಂದೆ ಕರೆಯುವರು. ಕರಗಾಂವ ಎಂಬ ಊರಿನ ಹೆಸರು ಕೇಳಿ ಬಂದರೆ ಎಲ್ಲರಿಗೂ ತಟ್ಟನೇ ನೆನಪಾಗುವುದು ಡಿ ಟಿ  ಪಾಟೀಲರು. ಇನ್ನೊಂದು ಹೆಸರು ಕರಗಾಂವ ಬೀರಪ್ಪ ದೇವರು. ಈ ಬೀರದೇವರ ದೇವಸ್ಥಾನ ಕೂಡಾ ಡಿ ಟಿ ಪಾಟೀಲರ ಸಲಹೆಯಂತೆ ಬೆಳವಣಿಗೆ ಕಾಣುತ್ತಿದೆ. ಚಿಕ್ಕೋಡಿ ಹುಕ್ಕೇರಿ ಭಾಗದಲ್ಲಿ ಕಾಕಾ ಎಂದೇ ಚಿರಪರಿಚಿತರಾಗಿದ್ದಾರೆ.

ಕೌಟುಂಬಿಕ ಜೀವನ -
ತಮ್ಮನಗೌಡರಿಗೆ ದೇವಗೌಡ ಪಾಟೀಲ ಮತ್ತು ಪರಗೌಡ ಪಾಟೀಲ ಎಂಬ ಗಂಡು ಮಕ್ಕಳು ಪರಗೌಡ ಪಾಟೀಲರು ಜಿಲ್ಲಾ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಿ ಟಿ ಪಾಟೀಲರಿಗೆ ಸಂಜೀವ ಗೌಡ ಪಾಟೀಲ ಮತ್ತು ರಾಜೀವ್ ಪಾಟೀಲ್ ಇಬ್ಬರೂ ಗಂಡು ಮಕ್ಕಳು. ರಾಜೀವ ಪಾಟೀಲರಿಗೆ  ರೀಶಬ್ ಪಾಟೀಲ ಮತ್ತು ನೀಲ್ ಪಾಟೀಲ ಪುತ್ರರಿದ್ದಾರೆ.

ಪ್ರಾರಂಬಿಕ ರಾಜಕೀಯ/ಸಾಮಾಜಿಕ ಜೀವನ -
 ಡಿ ಟಿ ಪಾಟೀಲರು ಚಿಕ್ಕ ವಯಸ್ಸಿನಲ್ಲೇ ನಾಯಕತ್ವದ ಗುಣ ಬೆಳೆಸಿಕೊಂಡು ಬೆಳೆದವರೂ. ಡಿ ಟಿ ಪಾಟೀಲರೂ ಬೆಳಗಾವಿ, ರಾಜ್ಯ ರಾಜಕೀಯ ನೇತಾರರು  ಎನಿಸಿಕೊಂಡಿರುವ ಅಪ್ಪಣ್ಣಗೌಡಾ ಪಾಟೀಲ, ಎಮ್ ಪಿ ಪಾಟೀಲ, ಬಸಗೌಡ ಪಾಟೀಲ ವಿಶ್ವನಾಥ್ ಕತ್ತಿ ಯವರ ಸಮಕಾಲಿನರು. ಗಾಂಧಿವಾದಿಗಳಾದ ಡಿ ಟಿ ಪಾಟೀಲರು ಹಳ್ಳಿಗಳ ವಿಕಾಸಕ್ಕೆ  ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ರಾಜಕೀಯ ಸೇರಿ ಸಹಕಾರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಹಕಾರ ಕ್ಷೇತ್ರದಲ್ಲಿ ಮಿಂಚಿದ್ದಾರೆ. ತಾನೂ ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಸಹಕಾರದ ತತ್ವ ಮೈಗೂಡಿಸಿಕೊಂಡು ಹಲವಾರು ಸಹಕಾರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಗ್ರಾಮೀಣ ನ್ಯಾಯವಾದಿ - ಕರಗಾಂವ ಗ್ರಾಮಕ್ಕೆ  ಬಡವರು, ರೈತಾಪಿ ಜನರು ತಮ್ಮ ಪ್ರಕರಣಗಳನ್ನು  ಕರಗಾಂವ ಗ್ರಾಮದ ಡಿ ಟಿ ಪಾಟೀಲರ ನಿವಾಸಕ್ಕೆ ಬಂದು ಸಮಸ್ಯೆಗಳನ್ನು  ಬಗೆಹರಿಸಿಕೊಳ್ಳುತ್ತಾರೆ. ಗೌಡರು ಯಾರಿಗೂ ಕೆಟ್ಟವರಾಗದೆ ಎಲ್ಲರಿಗೂ ಸಮಾಧಾನ ಹೇಳಿ ಸಮಸ್ಯೆ ಇತ್ಯರ್ಥ ಮಾಡುತ್ತಾರೆ. ಜನರು ಕೋರ್ಟ್ ಗಳಿಗೆ ಸುತ್ತಿ   ದುಡ್ಡು ಕರ್ಚು ಮಾಡುವ ಬದಲು ಈ ಗೌಡರ ನ್ಯಾಯಾಲಯಕ್ಕೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ. ಕೌಟುಂಬಿಕ ಜಗಳಗಳು, ಆಸ್ತಿ ತಕರಾರು, ಸೇರಿ ಹಲವಾರು ಸಮಸ್ಯೆಗಳನ್ನು ಇವರು ಇತ್ಯರ್ಥ ಮಾಡುತ್ತಾರೆ. ಈ ಭಾಗದ ಬಡ ಜನರು ಇಂದಿಗೂ ಕೋರ್ಟ್ ಮುಖ ನೋಡಿಲ್ಲ   ಏನೇ ಸಮಸ್ಯೆ ಬಂದರೂ ಜನರು ಬನ್ನಿ ಕಾಕಾರ ಮನೆಗೆ ಎನ್ನುವ ಮಾತು ಇಂದಿಗೂ ಪ್ರಸ್ತುತ.

ಸಮಾಜಮುಖಿ ಚಟುವಟಿಕೆ ಕರಗಾಂವ ಗ್ರಾಮ ಶಾಂತಿಗೆ ಹೆಸರುವಾಸಿಯಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ಎಲ್ಲ ಜನರೂ ಆತ್ಮಿಯತೆಯಿಂದ ವಾಸಿಸುತ್ತಾರೆ. ಎಲ್ಲ ಜಾತಿ ಜನಾಂಗದವರು ಕಾಕಾರ ಕುಟುಂಬಕ್ಕೆ ಹೋಗಿ ಸಹಾಯ, ಸೇವೆ ಪಡೆಯುತ್ತಾರೆ. ನಂಬಿದ ಜನರನ್ನು ಕಾಕಾ ರವರು ಎಂದು ಕೈ ಬಿಡುವುದಿಲ್ಲ.

ಆರ್ಥಿಕ ವಿಕಾಸದಲ್ಲಿ ಬಡವರ ಬಂದು - ಗ್ರಾಮ ವಿಕಾಸಕ್ಕಾಗಿ ಜನರಿಗೆ, ಕೃಷಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ, ಸೇರಿ ಹಲವಾರು ಕೃಷಿ ಚಟುವಟಿಕೆಗೆ  ಪ್ರೋತ್ಸಾಹಿಸಿದ್ದಾರೆ. ಕರಗಾಂವ ಗ್ರಾಮದಲ್ಲಿ ಕೃಷಿ ಸೇವಾ ಕೇಂದ್ರ ಸ್ಥಾಪಿಸಿ ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಸಾಮಗ್ರಿಗಳನ್ನು ಒದಗಿಸುವ ಮೂಲಕ ರೈತರ ಕಲ್ಯಾಣಕ್ಕೆ ಪ್ರೋತ್ಸಾಹಿಸುತ್ತಾರೆ. ಡಿ ಟಿ ಪಾಟೀಲರು ಚಿಕ್ಕೋಡಿ ಯಲ್ಲಿ ಡಿ ಟಿ ಪಾಟೀಲ ಕೋ ಆಫ್  ಬ್ಯಾಂಕ್ ನಿ ಎಂಬ ಬ್ಯಾಂಕನ್ನು ಸ್ಥಾಪಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸೇರಿ ಎಲ್ಲ ರೀತಿಯ ನೆರವು ನೀಡುತ್ತಾರೆ. ಈಗ ಇದರ ಶಾಖೆಗಳು ಯಾದಗೂಡ, ಬೆಳಗಾವಿ, ನಿಪ್ಪಾಣಿ ಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೊಟಭಾಗಿ ಏತ ನೀರಾವರಿ ಮೂಲಕ ಹುಕ್ಕೇರಿ ಮತ್ತು ಚಿಕ್ಕೋಡಿ ತಾಲ್ಲೂಕಿನ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ . ಚಿಕ್ಕೋಡಿ ಜಿಲ್ಲೆ, ಕರಗಾಂವ ಹಾಗೂ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗೆ ಹೋರಾಟ ಮಾಡಿ ಬೆಂಬಲಿಸುತ್ತಿದ್ದಾರೆ. ಸದ್ಯ ಡಿ ಟಿ ಪಾಟೀಲ ರವರು ಸದ್ಯ ಬೆಳಗಾವಿಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ಪಟ್ಟಣ ಬ್ಯಾಂಕುಗಳ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಹಕಾರ ಕ್ಷೇತ್ರದ ಬೆಳವಣಿಗೆ, ಬದಲಾವಣೆಗೆ ಹಲವಾರು ಶಿಫಾರಸು ಸಲ್ಲಿಸಿದ್ದಾರೆ. ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ
ಗ್ರಾಮದಲ್ಲಿ ಸಾರಿಗೆ ಸಂಪರ್ಕ, ಪ್ರಾಥಮಿಕ ಆರೋಗ್ಯ ಕೇಂದ್ರ, ಮೂಲಭೂತ ಸೌಕರ್ಯ, ಕುಡಿಯುವ ನೀರು  ಸೇರಿ ಹಲವಾರು ಕಾರ್ಯ ಚಟುವಟಿಕೆಗಳ ಮೂಲಕ ಮಾದರಿ ಗ್ರಾಮ ಪಂಚಾಯಿತಿ ಎನ್ನುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕೋಡಿಯ ಸಿ ಎಲ್ ಇ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿ, ಎಸ್ ಡಿ ವಿ ಎಸ್ ಸಂಘದ ಅಧ್ಯಕ್ಷರಾಗಿ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ, ನಿಡಸೋಸಿಯ ಎಸ್ ಜೆ ಪಿ ಎನ್ ಸಂಸ್ಥೆಯ ಸದಸ್ಯರಾಗಿ  ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ.ಇವರಿಗೆ ರಾಜ್ಯ ಸರ್ಕಾರದ ಸಹಕಾರ ರತ್ನ ಪ್ರಶಸ್ತಿ ಸೇರಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ.
       ಡಿ ಟಿ ಪಾಟೀಲರಿಗೆ 2013-14ರಲ್ಲಿ ವಿಜೃಂಭಣೆಯ ಅಮೃತಮಹೋತ್ಸವವನ್ನು ಅವರ ಅಪಾರ ಬೆಂಬಲಿಗರು ಆಚರಿಸಿದ್ದರು. ಈ ಕಾರ್ಯಕ್ರಮ ರಾಜ್ಯ ಮಟ್ಟದ ಹಲವಾರು ನಾಯಕರ ಸಮಾಗಮಕ್ಕೆ ವೇದಿಕೆಯಾಗಿತ್ತು. ಈಗ 83 ನೇ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿ 84ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಡಿ  ಟಿ ಪಾಟೀಲ ಕರಗಾಂವ ರಿಗೆ  ಆ ದೇವರು ಹೆಚ್ಚಿನ ಸೇವೆ ನೀಡುವ ಮಟ್ಟದಲ್ಲಿ ಅವಕಾಶ ಒದಗಿಸಲಿ ಹಾಗೂ ಆರೋಗ್ಯ ಚನ್ನಾಗಿರಲಿ ಎನ್ನುವುದೇ ನನ್ನ ಮತ್ತು ಎಲ್ಲರ ಆಶಯ.
                                             
      
 ಭೈರಪ್ಪ ಹಾಲಪ್ಪಗೋಳ ಕರಗಾಂವ
 ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು ಚಿನ್ನದ ಪದಕ ವಿಜೇತರು,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ 

7 comments: