Thursday, 2 May 2019

ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ, ಆಪ್ತ ಸಲಹೆ ಅವಶ್ಯಕ

ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ, ಆಪ್ತ ಸಲಹೆ ಅವಶ್ಯಕ

ಭಾರತ ಕೃಷಿ ಪ್ರಧಾನ ರಾಷ್ಟ್ರ , ಇಲ್ಲಿ ಬಡತನ, ಅನಕ್ಷರತೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನರಿಗೆ ಕೃಷಿ ಕಾರ್ಯ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಭಾರತದ ಕೃಷಿ ಮಾನ್ಸೂನ್ ಮಳೆಯೊಂದಿಗೆ ಆಡುವ ಜೂಜಾಟವಾಗಿದೆ. ಒಂದು ಸಲ ವಿಪರೀತ ಮಳೆಯಾಗಿ ಹಾಳಾಗುತ್ತದೆ. ಒಮ್ಮೆ ಸತತ ಹತ್ತು ವರ್ಷಗಳವರೆಗೆ ಬರಗಾಲ  ಹೀಗಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಹಲವಾರು ನೈಸರ್ಗಿಕ ವಿಕೋಪಗಳು, ಮಾನವ ನಿರ್ಮಿತ ವಿಕೋಪಗಳು ಕಾರಣವಾಗುತ್ತವೆ.
                             ಪ್ರಮುಖ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳು ಮತ್ತು ಕೌಟುಂಬಿಕ ಮತ್ತು ಸಾಮಾಜಿಕ ಆರ್ಥಿಕ ಸಮಸ್ಯೆಗಳು ಎಂದರೆ ಬರಗಾಲ, ಪ್ರವಾಹ, ಭೂಕಂಪ, ಚಂಡಮಾರುತ, ಅತಿಯಾದ ಭೂ ಸವಕಳಿ, ಭೂ ಕುಸಿತ, ಬೆಳೆ ಹಾನಿ, ಬೆಲೆ ಕುಸಿತ, ಕೀಟಗಳ ಹಾವಳಿ, ಕೊಳವೆ ಬಾವಿಗಳ ವಿಫಲತೆ, ಅತಿಯಾದ ಸಾಲ, ಅಧಿಕ ಬಡ್ಡಿ, ಸಾಲ ವಸೂಲಿಗೆ ಮನೆಗೆ ಬ್ಯಾಂಕ್ ಅಧಿಕಾರಿಗಳ ಬೇಟಿ, ಮೇವಿನ ಕೊರತೆ, ನೀರಿನ ಸಮಸ್ಯೆ, ಅನಾರೋಗ್ಯ, ಹೆಚ್ಚಿನ ಮನೆಖರ್ಚುಗಳು, ಮಕ್ಕಳ ವಿವಾಹ ಮತ್ತು ಶಿಕ್ಷಣ ಖರ್ಚು, ಕೃಷಿ ಸಲಕರಣೆಗಳ ಕೊರತೆ, ಸಾರಿಗೆ ಸಂಪರ್ಕ ಕೊರತೆ, ಬಡತನ , ಕಡಿಮೆ ಇಳುವರಿ ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಸರಮಾಲೆಯೇ ಕಂಡು ಬರುತ್ತದೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗಿ ಬೇರೆ ಉದ್ಯೋಗದಲ್ಲಿ ತೊಡಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ದುಡುಕಿನ  ನಿರ್ಧಾರದಿಂದ ಆತ್ಮಹತ್ಯೆ ಯಂತಹ ಪ್ರಯತ್ನಕ್ಕೆ ಕೈ ಹಾಕುತ್ತಾರೆ ಆಗ ರೈತರಿಗೆ ಸಾಂತ್ವನ, ಆಪ್ತ ಸಲಹೆ, ಸೂಕ್ತ ಪರಿಹಾರ, ಮಾರ್ಗದರ್ಶನ ನೀಡುವುದು ಅವಶ್ಯಕವಾಗುತ್ತದೆ.
                   ರೈತರ ಆತ್ಮಹತ್ಯೆ ಪ್ರಕರಣಗಳು ಇತ್ತೀಚೆಗೆ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು. ಕೃಷಿ ಅಧಿಕಾರಿಗಳು ಕ್ಷೇತ್ರ /ರೈತರ ಸ್ಥಳಗಳಿಗೆ ಬೇಟಿ ನೀಡಿ ಸೂಕ್ತ ಸಲಹೆ, ಸಾಂತ್ವನ ನೀಡುವುದು ಅತ್ಯವಶ್ಯಕವಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಅಂತೂ ಸಮಸ್ಯೆಗಳಿಗೆ ಹೇಳಿ ಮಾಡಿಸಿದ  ಪ್ರದೇಶದಂತಿದೆ. ಅಂತಹ ಪ್ರದೇಶಗಳಲ್ಲಿ ರೈತರಿಗೆ ಸೂಕ್ತ ಸಲಹೆಗಳು, ಮಾರ್ಗದರ್ಶನ ನೀಡುವುದು ಅನಿವಾರ್ಯವಾಗಿದೆ.
      ಮೇಲ್ಕಂಡ ಕೃಷಿ ವಿಚಾರಗಳಿಗೆ ಮಾನಸಿಕ ಒತ್ತಡ, ಖಿನ್ನತೆ, ಅಂಜಿಕೆ, ಭಯ, ಅಳು, ಜಿಗುಪ್ಸೆ, ಕೊರಗುವಿಕೆ, ಮರೆಯುವಿಕೆ ಸೇರಿ ಮುಂತಾದ ಮಾನಸಿಕ ಒತ್ತಡಕ್ಕೆ ರೈತರು ಒಳಗಾಗುತ್ತಾರೆ. ಇದರಿಂದ ವಿಚಲಿತರಾಗಿ ಆತ್ಮಹತ್ಯೆ ಯತ್ನ ಮಾಡುವ ಘಟನೆಗಳನ್ನು ಗಮನಿಸಿದ್ದೇವೆ. ಇವುಗಳಿಂದ ಮುಕ್ತಿ ಹೊಂದಲು, ರೈತರು ಮತ್ತೆ  ಕೃಷಿಯಲ್ಲಿ ಸಕ್ರೀಯರಾಗಬೇಕಾದರೆ ಅವರಿಗೆ ಮಾನಸಿಕ ಬೆಂಬಲದ ಅವಶ್ಯಕತೆ ಇರುತ್ತದೆ . ಅವರ ಭಾವನೆಗಳಿಗೆ ಸ್ಪಂದಿಸುವ ಕಾರ್ಯ ನಡೆಯಬೇಕಿದೆ. ರೈತರು ಸೂಕ್ತ ಸಲಹೆಯ ಕಾತರದಲ್ಲಿರುತ್ತಾರೆ ಆಗ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದಾಗ ಅವರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಕೃಷಿಯಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕೆಲಸಗಳಾಗಬೇಕು.
              ಕಷ್ಟ ಪಟ್ಟು ಸಾಲ ಮಾಡಿ ಬೆಳೆದ ಬೆಳೆ ಅತಿಯಾದ ಮಳೆ, ಬರಗಾಲ ಸೇರಿ ನೈಸರ್ಗಿಕ ವಿಕೋಪಗಳಿಂದ ಹಾನಿಯಾದಾಗ ಆಗ ರೈತರಿಗೆ ಜಗತ್ತೇ ಕಳಚಿ ಬಿದ್ದಂತಾಗುತ್ತದೆ. ಹಾಗೂ ಸಾಲ ಮಾಡಿ ಕೊಳವೆ ಬಾವಿ ಕೊರೆಯುವಾಗ ನೀರು ದೊರೆಯದಿದ್ದರೆ ರೈತರು ಮಾನಸಿಕ ಕಾಯಿಲೆಯಿಂದ ಬಳಲುವ ಲಕ್ಷಣಗಳು ಕಂಡು ಬಂದಾಗ ಕೃಷಿ ಅಧಿಕಾರಿಗಳು ಮಾತ್ರ ಸಾಂತ್ವನ, ಸಲಹೆ ಹೇಳದೇ ನೆರೆಹೊರೆಯ ಜನರು ಕೂಡಾ ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳಿ ಅವರಿಗೆ ಮಾನಸಿಕ ಬೆಂಬಲ ನೀಡುವುದು ಎಲ್ಲರ ಕರ್ತವ್ಯವೂ ಆಗಿದೆ.


ಆಪ್ತಸಮಾಲೋಚನೆ/ಕೃಷಿ ಸಲಹೆ ಎಲ್ಲಿ ಲಭ್ಯ?
-ರೈತ ಸಂಪರ್ಕ ಕೇಂದ್ರ
-ಕೃಷಿ ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳು
-ಕೃಷಿ ಸಂಬಂಧಿತ ಸರ್ಕಾರೇತರ ಸಂಸ್ಥೆಗಳು
-ಮನೋ ವೈದ್ಯರು
-ವೈದ್ಯಕೀಯ ಸಮಾಜ ಕಾರ್ಯಕರ್ತರು
-ಸಮಾಜಕಾರ್ಯಕರ್ತರು
-ಮಾನಸಿಕ ತಜ್ಞರು
-ಕೃಷಿ ಮತ್ತು ತೋಟಗಾರಿಕೆ ಇಲಾಖೆ
-ಪ್ರಗತಿಪರ ರೈತರು
-ಕೃಷಿ ವಿಷಯಗಳ ತಜ್ಞರು ಮತ್ತು ಉಪನ್ಯಾಸಕರು
-ರೈತ ನಾಯಕರು
 ಮುಂತಾದ ಕಡೆ


ಆಪ್ತ ಸಮಾಲೋಚನೆಯಲ್ಲಿ ಚರ್ಚಿಸಬಹುದಾದ ವಿಷಯಗಳು
-ಲಾಭದಾಯಕ ಬೆಳೆ ಬೆಳೆಯುವ ಕುರಿತು ಮಾರ್ಗದರ್ಶನ
-ಕೃಷಿ ಕ್ಷೇತ್ರದಲ್ಲಿನ ನಷ್ಟ ಪರಿಹಾರ ಪಡೆಯುವ ಕುರಿತು
-ವಿಕೋಪ ನಿರ್ವಹಣೆ ಮತ್ತು ಸೂಕ್ತ ಪರಿಹಾರ ಕುರಿತು ಸಲಹೆ
-ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳ ಬಗ್ಗೆ
-ಉತ್ತಮ ಕೃಷಿ ನಿರ್ವಹಣೆಗೆ ಸಲಹೆಗಳು
-ಮಾನಸಿಕ ಒತ್ತಡ, ಖಿನ್ನತೆ ನಿವಾರಣೆ
-ವೈಜ್ಞಾನಿಕ ಕೃಷಿ ಸಲಕರಣೆಗಳು
-ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಲಹೆ
-ಕೃಷಿಯೊಂದಿಗೆ ಕುಟುಂಬ ನಿರ್ವಹಣೆ
-ಹಣಕಾಸಿನ ನಿರ್ವಹಣೆ
-ಅಲ್ಪಾವಧಿ ಬೆಳೆ ಮತ್ತು ಲಾಭದ ಬೆಳೆಗಳ ಕುರಿತು
-ಕೃಷಿ ಯೊಂದಿಗೆ ಉಪಕಸಬುಗಳ ನಿರ್ವಹಣೆ
-ಪರಿಹಾರ
-ಮಣ್ಣು ಪರೀಕ್ಷೆ
-ಹನಿ ನೀರಾವರಿ ಮತ್ತು ತುಂತುರು ನೀರಾವರಿ ಸೌಲಭ್ಯ
-ಸೂಕ್ತ ಮಾನಸಿಕ ಬೆಂಬಲ
-ಕೃಷಿ, ಕೌಟುಂಬಿಕ ಸಮಸ್ಯೆಗಳು ಮತ್ತು ಪರಿಹಾರಗಳು
ಮುಂತಾದವು



ರೈತರಿಗೆ ಸಾಂತ್ವನ /ಆಪ್ತಸಲಹೆಯ ಅವಶ್ಯಕತೆಗಳು
1)ಕೃಷಿ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡುತ್ತದೆ.
2)ಕೃಷಿ ಕಾರ್ಯದಲ್ಲಿ ಉತ್ಸಾಹದಿಂದ ಮುಂದುವರೆಯಲು
3)ಮನೋ ಸಾಮಾಜಿಕ ಬೆಂಬಲ ನೀಡುತ್ತದೆ
4)ಒತ್ತಡ, ಖಿನ್ನತೆ ಸೇರಿ ಮಾನಸಿಕ ಸಮಸ್ಯೆಗಳಿಂದ ಮುಕ್ತವಾಗಲು
5)ಕೃಷಿಯಲ್ಲಿ ಸುಧಾರಣೆ ತರಲು ಸೂಕ್ತ ಸಲಹೆಗಳನ್ನು ಪಡೆಯಲು
6)ಹೊಸ ತಂತ್ರಜ್ಞಾನ, ಕೃಷಿ ಸಲಕರಣೆಗಳ ಬಗ್ಗೆ ವಿಶೇಷ ಜ್ಞಾನ ಪಡೆದುಕೊಳ್ಳಲು
7)ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆಯಲು ಸಹಾಯಕ.
8)ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕ
9)ಕೃಷಿಯೊಂದಿಗೆ ಕೌಟುಂಬಿಕ ನಿರ್ವಹಣೆ  ಮಾಡಲೂ ಸಲಹೆ
10)ರೈತರ ಮನೋ ಸ್ಥೈರ್ಯ ಹೆಚ್ಚಿಸಲು ಸಹಾಯಕ
ಮುಂತಾದವು.

ಸಂದಿಗ್ಧ ಪರಿಸ್ಥಿತಿಯಲ್ಲಿರುವ ರೈತರಿಗೆ ಇಂದಿನ ಆಧುನಿಕ ದಿನಮಾನಗಳಲ್ಲಿ ಸಾಂತ್ವನ, ಸಲಹೆ, ಆಪ್ತ ಸಮಾಲೋಚನೆಯ ಅವಶ್ಯಕತೆ ಇದ್ದು ರೈತರು ಸೂಕ್ತ ಸಲಹೆ ಪಡೆದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿ, ಕೃಷಿ ಇಲಾಖೆ ಕೂಡಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತ ಸ್ನೇಹಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದರೆ ರೈತರ ಕಲ್ಯಾಣ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ, ಕೃಷಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ , ಮಾನಸಿಕ ಆಸ್ಪತ್ರೆಗಳಲ್ಲಿ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ರೈತರಿಗೆ ಮಾನಸಿಕ ಬೆಂಬಲ ನೀಡಲು ಮುಂದಾಗಬೇಕಾಗಿದೆ. ಅನ್ನ ನೀಡುವ ರೈತನಿಗೆ ಸಮಸ್ಯೆ ಆದರೆ ಅದು ಇಡೀ ಮಾನವ ಸಮುದಾಯಕ್ಕೆ ಸಮಸ್ಯೆ ಇದ್ದಂತೆ ಎಲ್ಲ ರೈತರೂ ಕೂಡಾ ಸುಖದಿಂದ ಬಾಳಲಿ ಎನ್ನುವುದೇ ನನ್ನ ಆಶಯ.



ಭೈರಪ್ಪ ಹಾಲಪ್ಪಗೋಳ ಕರಗಾಂವ. ತಾ. ಚಿಕ್ಕೋಡಿ ಜಿ. ಬೆಳಗಾವಿ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು ಚಿನ್ನದ ಪದಕ ವಿಜೇತರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ 

7 comments:

  1. ರೈತ ದೇಶದ ಬೆನ್ನೆಲುಬು

    ReplyDelete
  2. ಹೊನ್ನ ಬಿತ್ತೇವು ಹೊಲಕೆಲ್ಲ

    ReplyDelete
  3. ಮಳೆ ಇದ್ದರೆ ಬೆಳೆ, ರೈತನಿದ್ದರೆ ಕೃಷಿ

    ReplyDelete
  4. ಜಗತ್ತಿಗಾಗಿ ರೈತ ರೈತನಿಗಾಗಿ ನಾವು

    ReplyDelete