ಕಲಾ, ಸಮಾಜ ವಿಜ್ಞಾನ, ಮಾನವೀಯ ಶಾಸ್ತ್ರಗಳ ಬೇಡಿಕೆ ಹೆಚ್ಚಳ
ಕಲಾ ವಿಭಾಗ, ಸಮಾಜ ವಿಜ್ಞಾನ ಎಂದ ತಕ್ಷಣ ಸಾಕಷ್ಟು ಜನರು ಮೂಗು ಮುರಿಯುವರೆ ಹೆಚ್ಚು. ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗದ ಬಗ್ಗೆ ಕೀಳರಿಮೆ ಹೊಂದುತ್ತಾರೆ. ಎಸ್ ಎಸ್ ಎಲ್ ಸಿ ವರೆಗೆ ಕೂಡಿ ಕಲಿತ ವಿದ್ಯಾರ್ಥಿಗಳು ಕಲಾ ವಿಜ್ಞಾನ ವಾಣಿಜ್ಯ ಅಂಥ ಬೇರ್ಪಡೆಯಾಗಿ ಅವರ ಮದ್ಯೆ ಇರುವ ಸ್ನೇಹ ಬೆಳಸೋಕೆ ಕೂಡಾ ಹಿಂದೂ ಮುಂದೆ ನೋಡುತ್ತಾರೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶ ಬಂದ ನಂತರ ಯಾವ ಕೋರ್ಸಗೆ ಸೇರಬೇಕು ಅನ್ನುವುದು ದೊಡ್ಡ ಪ್ರಶ್ನೆ ಮೂಡುವುದು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸರ್ವೆ ಸಾಮಾನ್ಯ . ಎಲ್ಲರಿಗೂ ಮೊದಲಿನಿಂದಲೂ ಗೊತ್ತಿರುವ ಕೋರ್ಸ್ ಎಂದರೆ ಸಾಮಾನ್ಯ ಬಿ ಎ ಅದರಲ್ಲೂ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ವಿಷಯಗಳು ಬಿಟ್ಟರೆ ಬಾಷಾ ವಿಷಯಗಳು, ಇನ್ನು ಬಿಕಾಂ, ಬಿ ಎಸ್ ಸಿ. ಇನ್ನೂ ಇಂದಿನ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ, ತೋಟಗಾರಿಕೆ ಕೋರ್ಸಗಳೆ ಇಷ್ಟ.
ಮಕ್ಕಳಿಗೆ ಕಲಿಯುವ ವಿಷಯದ ಮೇಲೆ ಆಸಕ್ತಿ ಇರದೆ ಇದ್ದರೂ ನನ್ನ ಮಗ ಇಂಜನಿಯರಿಂಗ್ ಕಲಿಯಬೇಕು,ಡಾಕ್ಟರ್ ಪದವಿ ಬೇಕು ಎಂಬ ಆಶೆ. ಎಷ್ಟೇ ದುಡ್ಡು ಪಡೆದರೂ ಪರವಾಗಿಲ್ಲ ಎಲ್ಲರೂ ವಿಜ್ಞಾನದಂತಹ ಕೋರ್ಸಗಳನ್ನು ಪಡೆಯುತ್ತಿದ್ದಾರೆ ನನ್ನ ಮಗನಿಗೆ ಅದನೇ ಕಲಿಸುತ್ತೇನೆ ಎಂಬ ಹಠಕ್ಕೆ ಬಿಳ್ಳುತ್ತಾರೆ. ಆ ಮಗುವಿಗೆ ಯಾವ ವಿಷಯದ ಮೇಲೆ ಹೆಚ್ಚಿನ ಆಸಕ್ತಿ ಇದೆ ಎಂದು ನೋಡದೇ ಒತ್ತಾಯದ ಕಲಿಕೆಗೆ ಹಾಕಿದಾಗ ಮಕ್ಕಳಿಗೆ ಅಂಜಿಕೆ ಭಯ ಒತ್ತಡ ಕಾಣುತ್ತದೆ. ಮಕ್ಕಳು ವಿಷಯದ ಮೇಲೆ ಹಿಡಿತ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ, ಕಡಿಮೆ ಫಲಿತಾಂಶ, ಅನುತ್ತೀರ್ಣ ಆಗುವ ಸಂಭವ ಇರುತ್ತದೆ. ಮಕ್ಕಳ ಆಸಕ್ತಿ ವಿಷಯಕ್ಕೆ ತಕ್ಕಂತೆ ಓದಲು ಸ್ವಾತಂತ್ರ್ಯ ನೀಡಬೇಕು ಇನ್ನೂ ಕೆಲವರು ಮಕ್ಕಳು ಗಳಿಕೆಗೆ ಸಂಬಂಧಿಸಿದಂತ ಕೋರ್ಸ್ಗಳನ್ನು ಆಯ್ಕೆಮಾಡಿಕೋಳ್ಳುತಾರೆ. ಆದರೆ ಆ ಮಗುವಿಗೆ ಸಾಮಾಜಿಕ ಪ್ರಜ್ಞೆ ಅನುಭವವೇ ಇರುವುದಿಲ್ಲ. ಸಮಾಜ ವಿಜ್ಞಾನ ಕೋರ್ಸಗಳು ಗಳಿಕೆಯೊಂದಿಗೆ ಸಾಮಾಜಿಕ ಬೆರೆಯುವಿಕೆಯನ್ನು ಕಲಿಸಿ ಕೊಡುತ್ತದೆ. ಸಮಾಜ ವಿಜ್ಞಾನ ಮತ್ತು ಮಾನವೀಯ ವಿಜ್ಞಾನ ವಿಷಯಗಳನ್ನು ಕಲಿಯುವಾಗ ಸಂತೋಷಕ್ಕೆ ಮಿತಿಯೆ ಇಲ್ಲ.
ಕೆಲ ವಿದ್ಯಾರ್ಥಿಗಳು ಸಾಮಾಜಿಕ ಮತ್ತು ಮಾನವೀಯ, ಭಾಷಾ ವಿಷಯಗಳ ಮೇಲೆ ಆಸಕ್ತಿ ಹೊಂದಿರುತ್ತಾರೆ. ಅವರನ್ನು ಒತ್ತಾಯದಿಂದ ತಾಂತ್ರಿಕ, ವಿಜ್ಞಾನ ವಿಷಯಕ್ಕೆ ಸೇರಿಸಿದರೆ ಆ ಮಗು ಪಡಬಾರದ ಕಷ್ಟ ಪಡಬೇಕಾಗುತ್ತದೆ. ಇನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ದ ಆಸಕ್ತಿ ಮಗುವಿಗೆ ಕಲಾ ವಿಭಾಗದ ವಿಷಯ ನೀಡಿದರೆ ತೀರಾ ಕಷ್ಟ ಪಡಬೇಕಾಗುತ್ತದೆ.ಕೆಲವರು ಫಲಿತಾಂಶ ನೋಡಿ ಕೋರ್ಸ್ ಆಯ್ಕೆ ಮಾಡಿರುತ್ತಾರೆ. 85 ಕ್ಕಿಂತ ಹೆಚ್ಚಾದರೆ ವಿಜ್ಞಾನ, 70 ಕ್ಕಿಂತ ಹೆಚ್ಚಿನ ಅಂಕ ಪಡೆದರೇ ವಾಣಿಜ್ಯ ವಿಭಾಗ, ಇನ್ನು 70 ಕ್ಕಿಂತ ಕಡಿಮೆ ಅಂಕ ಪಡೆದವರು ಕಲಾ ವಿಭಾಗ ಎನ್ನುವ ನಂಬಿಕೆ ಇತ್ತು ಆದರೆ ಅದು ಇಂದಿಲ್ಲ. ಫಲಿತಾಂಶದಲ್ಲಿ ಏನೂ ಬೇಕಾದರೂ ಆಗಬಹುದು, ಗಳಿಸಿದ ಅಂಕಗಳಿಗೆ ಆಯ್ದುಕೊಳ್ಳುವ ವಿಷಯಗಳಿಗೆ ಯಾವುದೇ ಸಂಬಂಧವಿಲ್ಲ ಜಸ್ಟ್ ಪಾಸಾದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಓದಬಹುದು, ರಾಜ್ಯಕ್ಕೆ ಟಾಪರ್ ಆದವರೂ ಕಲಾ ವಿಭಾಗ ಆಯ್ದಕೊಳ್ಳಬಹುದು.
ವಿದ್ಯಾರ್ಥಿಗಳು ಹೇಗೆ ತಮ್ಮ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು?
1)ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣಕ್ಕೆ ಕೋರ್ಸಗಳನ್ನೂ ಆಯ್ದುಕೊಳ್ಳುವಾಗ ತಮ್ಮ ಆಸಕ್ತಿವುಳ್ಳ ವಿಷಯ ಆಯ್ದಕೊಳ್ಳಬೇಕು.
2)ಪಾಲಕರು ಮಕ್ಕಳ ಆಯ್ಕೆಗೆ ಅವಕಾಶ ನೀಡಬೇಕು
3)ಸ್ನೇಹಿತರು ಆಯ್ದುಕೊಳ್ಳುವ ವಿಷಯ ಆಯ್ಕೆ ಮಾಡಬಾರದು
4)ಯಾವ ಕೋರ್ಸ್ ಹೆಚ್ಚು ಅಲ್ಲ, ಯಾವುದು ಕಡಿಮೆ ಅಲ್ಲ ತನ್ನದೇ ಆದ ವಿಶೇಷತೆ ಜ್ಞಾನದ ಸಾಮರ್ಥ್ಯ ಎಲ್ಲ ಕೋರ್ಸ್ಗಳಿಗೂ ಇದೆ.
5)ಫಲಿತಾಂಶ ನೋಡಿ ವಿಜ್ಞಾನ, ವಾಣಿಜ್ಯ ಕಲೆ ಎಂದು ಕ್ರಮವಾಗಿ ಆಯ್ದಕೊಳ್ಳಬೇಡಿ, ಯಾರುಬೇಕಾದರೂ ತಮಗೆ ಇಷ್ಟವಾದ ವಿಭಾಗ ಆಯ್ದಕೊಳ್ಳಬಹುದು.
6)ಹೆಚ್ಚಿನ ಸಲಹೆಗೆ ಆಪ್ತ ಸಮಾಲೋಚಕರು, ಶಿಕ್ಷಣ ತಜ್ಞರ ಸಲಹೆ ಪಡೆಯಬಹುದು
7)ಭವಿಷ್ಯದ ಉದ್ಯೋಗ, ಸಾಧಿಸಬಹುದಾದ ಫಲಿತಾಂಶಗಳ ಊಹೆಯ ಮೂಲಕ ಕೋರ್ಸಗಳನ್ನೂ ಆಯ್ದುಕೊಳ್ಳಿ.
8)ಹಿಂದಿನ ತರಗತಿಗಳಲ್ಲಿ ಅಚ್ಚುಮೆಚ್ಚಿನ ವಿಷಯಗಳ ಆಯ್ಕೆಗೆ ಒತ್ತುಕೊಡಿ ಅವುಗಳ ಅಂಕಗಳ ಮೇಲೆ ಆಯ್ಕೆ ಬೇಡ. ಏಕೆಂದರೆ ಗಳಿಸಿದ ಅಂಕಗಳಲ್ಲಿ ವ್ಯತ್ಯಾಸ ಆಗಿರಬಹುದು.
9)ಕಲಾ ವಿಷಯಗಳಲ್ಲಿ ಹೆಚ್ಚಿನ ಬರವಣಿಗೆ, ವಿಶ್ಲೇಷಣೆಯ ಅವಶ್ಯಕತೆ ಇರುತ್ತದೆ, ವಿಜ್ಞಾನ, ವಾಣಿಜ್ಯ ವಿಷಯಗಳಲ್ಲಿ ನಿಕರತೆ, ವಸ್ತುನಿಷ್ಠತೆ, ಕಡಿಮೆ ಬರವಣಿಗೆ ಇರುತ್ತದೆ ಆಯ್ಕೆ ಮಾಡುವಾಗ ಯೋಚಿಸಿ ಆಯ್ಕೆ ಮಾಡಬೇಕು.
10)ಕಲಾ ವಿಭಾಗದಲ್ಲಿ ಫಲಿತಾಂಶ ಗರಿಷ್ಠತೆ ಕಡಿಮೆ ಇರುತ್ತದೆ, ವಾಣಿಜ್ಯ ವಿಜ್ಞಾನ ವಿಭಾಗದಲ್ಲಿ ಫಲಿತಾಂಶ ಹೆಚ್ಚಳ ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ.
ಕಲಾ ವಿಭಾಗ-
ಮಾನವೀಯ, ಸಮಾಜ ವಿಜ್ಞಾನ ವಿಷಯಗಳನ್ನು ಓದುವುದು ಎಷ್ಟೋಂದು ಸಂತೋಷ. ಮಾನವೀಯ, ಸಮಾಜ ವಿಜ್ಞಾನ, ಕಲಾ ವಿಭಾಗದ ವಿದ್ಯಾರ್ಥಿಗಳು ಸಾಮಾಜಿಕವಾಗಿ ಬರೆಯುತ್ತಾರೆ. ಸಮಾಜದಲ್ಲಿ ಹೇಗೆ ಬಾಳಬೇಕು, ಯಾವ ವ್ಯಕ್ತಿಯ ಜೋತೆ ಹೇಗಿರಬೇಕು ಎನ್ನುವ ವಿಷಯಗಳನ್ನು ಇಲ್ಲಿ ಕಲಿಯಲಾಗುತ್ತದೆ. ಹೆಸರೆ ಹೇಳುವಂತೆ ಮಾನವೀಯ ಶಾಸ್ತ್ರ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು, ಗುಣಗಳನ್ನು ಬೆಳಸಿಕೊಂಡಿರುತ್ತಾರೆ. ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ ಎರಡೂ ಭಾಷಾ ವಿಷಯಗಳು ಅದರೊಂದಿಗೆ ನಾಲ್ಕು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ಆಸಕ್ತಿ ವಿಷಯಗಳನ್ನು ಆಯ್ದಕೊಳ್ಳಬೇಕು. ಪ್ರಮುಖ ಸಮಾಜ ವಿಜ್ಞಾನ ವಿಷಯಗಳೆಂದರೆ ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ ಶಿಕ್ಷಣಶಾಸ್ತ್ರ, ಭೂಗೋಳಶಾಸ್ತ್ರ, ತತ್ವಶಾಸ್ತ್ರ ಮುಂತಾದವು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಾ ವಿಷಯಗೆ ನಂ 1
ಹೆಚ್ಚಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಾ ವಿಭಾಗದ ವಿಷಯಗಳು ಟಾಪ್ ನಂ 01 ನಲ್ಲಿರುತ್ತವೆ. ಎಷ್ಟೇ ದೊಡ್ಡ ದೊಡ್ಡ ಕೋರ್ಸ್ಗಳನ್ನು ಓದಿದವರೂ ಕೂಡಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದರೆ ಸಮಾಜ ವಿಜ್ಞಾನ ಅಥವಾ ಮಾನವೀಯ ವಿಷಯಗಳನ್ನು ಓದಲೇಬೇಕು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡರು ಅದರಲ್ಲಿ 80% ಕಲಾ ವಿಭಾಗದ ವಿಷಯದ ಪ್ರಶ್ನೆಗಳೆ ಇರುತ್ತವೆ.
ಐಎಎಸ್ /ಕೆಎಎಸ್ ನಲ್ಲಿ ಕಲಾ, ಸಮಾಜ ವಿಜ್ಞಾನ, ಮಾನವೀಯ ವಿಜ್ಞಾನ ವಿಷಯಗಳೆ ಫೇವರಿಟ್
ಹಿಂದೆ ಐ ಎ ಎಸ್ ಮತ್ತು ಕೆ ಎ ಎಸ್ ಪರೀಕ್ಷೆಯಲ್ಲಿ ಐಚ್ಛಿಕ ವಿಷಯಗಳ ಆಯ್ಕೆ ಮಾಡಿಕೊಳ್ಳುವಾಗ ಪದವಿ ಪಡೆದ ವಿಷಯಗಳಲ್ಲಯಯೇ ಐಎಎಸ್ ಕೆಎಎಸ್ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಉದಾಹರಣೆ ಇಂಜನಿಯರಿಂಗ್ ಪದವಿ ಪಡೆದವರು ಇಂಜನಿಯರಿಂಗ್ ವಿಷಯ, ವೈದ್ಯಕೀಯ ಪದವಿ ಪಡೆದವರು ವೈದ್ಯಕೀಯ ವಿಷಯ, ವಿಜ್ಞಾನ ಪದವಿ ಪಡೆದವರು ವಿಜ್ಞಾನ ವಿಷಯ, ಕಲಾ ಪದವಿ ಪಡೆದವರು ಕಲಾ ವಿಷಯಗಳಲ್ಲಿ ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳುತ್ತಿದ್ದರು. ಆದರೆ ಇಂದು ಇಂಜಿನಿಯರಿಂಗ್, ವೈದ್ಯಕೀಯ, ವಿಜ್ಞಾನ, ವಾಣಿಜ್ಯ ಪದವಿ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ಕಲಾ, ಮಾನವೀಯ ಶಾಸ್ತ್ರಗಳು, ಸಮಾಜ ವಿಜ್ಞಾನ ವಿಷಯಗಳನ್ನು ಆಯ್ದುಕೊಂಡ ದೇಶದ ಅತ್ಯುನ್ನತ ಪರೀಕ್ಷೆಗಳಾದ ಐಎಎಸ್ ಐಪಿಎಸ್ ಮತ್ತು ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಿದ್ದಾರೆ. ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ , ಭೂಗೋಳಶಾಸ್ತ್ರ, ತತ್ವಶಾಸ್ತ್ರ ಮಾನವಶಾಸ್ತ್ರ ಅಪರಾಧ ಶಾಸ್ತ್ರ, ಗ್ರಾಮೀಣ ಅಭಿವೃದ್ಧಿ, ಸಹಕಾರ, ಸಾರ್ವಜನಿಕ ಆಡಳಿತ ಸೇರಿ ಪ್ರಮುಖ ವಿಷಯಗಳನ್ನು ಆಯ್ದುಕೊಂಡು ಪಾಸಾದ ಉದಾಹರಣೆಗಳು ಸಾಕಷ್ಟಿವೆ. ಹಲವಾರು ಐಎಎಸ್ ಆಪಿಸರ್ ಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ವಿಜ್ಞಾನ ಸೇರಿ ಪ್ರಮುಖ ಕೋರ್ಸ್ ಗಳನ್ನು ಮೊಟಕುಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕಲಾ ವಿಭಾಗ ಸೇರಿದ ಉದಾಹರಣೆಗಳು ಸಾಕಷ್ಟಿವೆ.
ಉದ್ಯೋಗದಲ್ಲಿ ನಂ 01
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿಷಯಗಳಲ್ಲಿ ಸಾಮಾನ್ಯವಾಗಿ ಮೂರು ಭಾಷಾ ವಿಷಯಗಳು (ಕನ್ನಡ ಇಂಗ್ಲಿಷ್ ಹಿಂದಿ) ಮತ್ತು ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ವಿಷಯಗಳು. ಇವುಗಳಲ್ಲಿ ಮೂರು ಭಾಷಾ ವಿಷಯಗೂ ಮತ್ತು ಸಮಾಜ ವಿಜ್ಞಾನ ಸೇರಿ ಒಟ್ಟು ಆರು ವಿಷಯಗಳಲ್ಲಿ ನಾಲ್ಕು ವಿಷಯಗಳ ಭೋದನೆಗೆ ಕಲಾ ವಿಭಾಗದ ವಿದ್ಯಾರ್ಥಿಗಳೆ ಬೇಕು. ಹೀಗಾಗಿ ಅತಿ ದೊಡ್ಡ ಉದ್ಯೋಗ ವ್ಯವಸ್ಥೆಯಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ 80% ಶಿಕ್ಷಕರು ಕಲಾ ಶಾಕ್ಟಕರೇ ಆಗಿರುತ್ತಾರೆ. ಪದವಿ ಪೂರ್ವ, ಪದವಿ ಸ್ನಾತಕೋತ್ತರ ವಿಷಯಗಳಲ್ಲಿ ಕಲಾವಿಭಾಗದ ವಿಷಯಗಳೆ ಹೆಚ್ಚಿರುವುದರಿಂದ ಕಲಾ ವಿಭಾಗದ ಉದ್ಯೋಗಿಗಳ ಪ್ರಮಾಣ ಹೆಚ್ಚಾಗಿದೆ.
ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ನಂತರ
ಕಲಾ ಪದವಿ (ಬಿ ಎ)
ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ ಶಿಕ್ಷಣಶಾಸ್ತ್ರ, ಭೂಗೋಳಶಾಸ್ತ್ರ, ತತ್ವಶಾಸ್ತ್ರ ಮಾನವಶಾಸ್ತ್ರ ಅಪರಾಧ ಶಾಸ್ತ್ರ ಸೇರಿ ಪ್ರಮುಖ ವಿಷಯಗಳಲ್ಲಿ ಪದವಿ ಶಿಕ್ಷಣ ಪೊರೈಸಬಹುದು. ಇಲ್ಲಿ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಮೂರು ವಿಷಯಗಳನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳಬೇಕಾಗುತ್ತದೆ.
ಕಲಾ ಸ್ನಾತಕೋತ್ತರ ಪದವಿ (ಎಂ ಎ)
ಸ್ನಾತಕೋತ್ತರ ಶಿಕ್ಷಣವನ್ನು ಇತಿಹಾಸ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ ಶಿಕ್ಷಣಶಾಸ್ತ್ರ, ಭೂಗೋಳಶಾಸ್ತ್ರ, ತತ್ವಶಾಸ್ತ್ರ ಮಾನವಶಾಸ್ತ್ರ ಅಪರಾಧ ಶಾಸ್ತ್ರ, ಗ್ರಾಮೀಣ ಅಭಿವೃದ್ಧಿ, ಸಹಕಾರ, ಸಾರ್ವಜನಿಕ ಆಡಳಿತ ಸೇರಿ ಪ್ರಮುಖ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಅಧ್ಯಯನ ಮಾಡಬೇಕಾಗುತ್ತದೆ. ಇದು ಪದವಿ ನಂತರ ಎರಡು ವರ್ಷಗಳ ಕೋರ್ಸ್ ಆಗಿದೆ.
ಡಾಕ್ಟರೇಟ್ ಶಿಕ್ಷಣ (ಪಿ ಹೆಚ್ ಡಿ)
ಸ್ನಾತಕೋತ್ತರ ಶಿಕ್ಷಣ ಪೊರೈಸಿದ ವಿಷಯಗಳಲ್ಲಿ ಮಾರ್ಗದರ್ಶಕರ ಸಹಾಯದಿಂದ ಒಂದು ವಿಷಯದ ಮೇಲೆ ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ಇದು ಮೂರುವರೆ ವರ್ಷಗಳ ಕೋರ್ಸ್ ಆಗಿದೆ.
ಕಲಾ ಮತ್ತು ವಿಜ್ಞಾನ ವಿಷಯಗಳ ಸಮ್ಮಿಶ್ರಣ ಕೋರ್ಸಗಳು
ಸಮಾಜ ಕಾರ್ಯ ಪದವಿ- ಸಮಾಜ ಕಾರ್ಯವು ಒಂದು ಇತ್ತಿಚಿನ ಜ್ಞಾನದ ಶಾಖೆಯಾಗಿದೆ. ಇದು ಒಂದು ಕಲೆ ಮತ್ತು ವಿಜ್ಞಾನದ ಸಮ್ಮಿಶ್ರಣವಾಗಿದೆ. ಇದು ವ್ಯಕ್ತಿ ಗುಂಪು ಸಮುದಾಯದ ಮನೋಸಾಮಾಜಿಕ ಸಮಸ್ಯೆಗಳಿಗೆ ವೈಜ್ಞಾನಿಕ ತಳಹದಿಯ ಮೂಲಕ ಸೂಕ್ತ ಪರಿಹಾರವನ್ನು ನೀಡುತ್ತದೆ. ಇದು ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಮಾನವಶಾಸ್ತ್ರ, ಅಪರಾಧ ಶಾಸ್ತ್ರ,, ತತ್ವಶಾಸ್ತ್ರ, ಪರಿಸರ ಅಧ್ಯಯನ, ಮನಃಶಾಸ್ತ್ರ, ನಿರ್ವಹಣೆ ವಿಷಯಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ.
ಇಲ್ಲಿ ಥಿಯರಿ ವಿಷಯಗಳನ್ನು ವರ್ಗಗಳಲ್ಲಿ ಕಲಿತು ಸಮುದಾಯದಲ್ಲಿ ಮಾನವೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಕ್ಷೇತ್ರ ಭೇಟಿ, ಶಾಲಾ ಸಮಾಜಕಾರ್ಯ, ಕ್ಷೇತ್ರ ಕಾರ್ಯ, ಸಮಾಜ ಕಾರ್ಯ ಶಿಬಿರ, ವಿಶೇಷ ಸಾಧಕರ ಮತ್ತು ಸಮಸ್ಯೆ ಪೀಡಿತ ವ್ಯಕ್ತಿಗಳ ಕೇಸ್ ಸ್ಟಡಿ, ವರ್ಗದಲ್ಲಿ ಪ್ರಾಯೋಗಿಕ ಆಟಗಳು, ಸಂಶೋಧನೆ ಸೇರಿ ಹಲವಾರು ಚಟುವಟಿಕೆಗಳಿಗೆ ಅವಕಾಶ ಸಿಗುತ್ತದೆ. ಸಮಾಜಕಾರ್ಯ ಎಂಬುದು ಜನರೊಂದಿಗೆ ವ್ಯವಹರಿಸುವ ವಿಜ್ಞಾನವಾಗಿದೆ. ಇದು ಸಂತೋಷದ ಕಲಿಕೆಗೆ, ನಾಯಕತ್ವ ಬೆಳವಣಿಗೆಗೆ ಸಹಾಯಕವಾಗಿದೆ. ವಿಜ್ಞಾನ ವಿಷಯಗಳಲ್ಲಿ ವಿಜ್ಞಾನದ ವಸ್ತುಗಳೊಂದಿಗೆ ಪ್ರಯೋಗದ ಮೂಲಕ ಅನುಭವ ಪಡೆದರೆ ಇಲ್ಲಿ ಇಡಿ ಸಮಾಜಕಾರ್ಯಕರ್ತರಿಗೆ ಇಡಿ ಸಮುದಾಯೇ ಪ್ರಯೋಗಾಲಯವಾಗಿದೆ.
ಮೂರು ವರ್ಷಗಳ ಬಿ ಎಸ್ ಡಬ್ಲ್ಯೂ ಪದವಿ, ನಂತರ ಎರಡು ವರ್ಷಗಳ ಎಂ ಎಸ್ ಡಬ್ಲ್ಯು ಸ್ನಾತಕೋತ್ತರ ಪದವಿ ಮತ್ತು ಪಿ ಹೆಚ್ ಡಿ ಕಲಿಯಲು ಅವಕಾಶವಿದೆ.
ಅರ್ಹತೆ - ದ್ವಿತೀಯ ಪಿಯುಸಿ ತತ್ಸಮಾನ (ಕಲಾ ವಾಣಿಜ್ಯ ವಿಜ್ಞಾನ ಜೆಓಸಿ ಡಿಪ್ಲೊಮಾ)
ಭಾರತದಲ್ಲಿ 1936 ರಲ್ಲಿ ಮೊದಲ ಬಾರಿಗೆ ಟಾಟಾಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಎಂಬ ಸಂಸ್ಥೆಯಲ್ಲಿ ಸಮಾಜ ಕಾರ್ಯ ಶಿಕ್ಷಣವನ್ನು ಪ್ರಾರಂಬಿಸಲಾಯಿತು ಮುಂದೆ 1947 ರಲ್ಲಿ ದೆಹಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ಲಕ್ನೋ ಸಮಾಜ ಕಾರ್ಯ ಶಾಲೆ, ವಾರಣಾಸಿಯಲ್ಲಿ ಸಮಾಜ ಕಾರ್ಯ ಶಾಲೆಯನ್ನು ಸ್ಥಾಪಿಸಲಾಯಿತು. ಈಗ ಎಲ್ಲ ರಾಜ್ಯಗಳಲ್ಲಿ ಸಮಾಜ ಕಾರ್ಯ ಪದವಿ, ಸ್ನಾತಕೋತ್ತರ ಪದವಿ, ಪಿ ಹೆಚ್ ಡಿ ಪದವಿಗಳನ್ನು ರಾಜ್ಯ, ಕೇಂದ್ರಿಯ, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸಮಾಜ ಕಾರ್ಯದ ಕಲಿಕೆಗೆ ಅವಕಾಶ ಇದೆ. ಇಂದು ಸಮಾಜ ಕಾರ್ಯ ಪದವಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೂ ಇಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆ ಇಲ್ಲ.
ಸಮಾಜ ಕಾರ್ಯದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ, ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಮಾಜ ಕಾರ್ಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ತಿದ್ದುಪಡಿ ಕ್ಷೇತ್ರದಲ್ಲಿ ಸಮಾಜ ಕಾರ್ಯ ಸೇರಿ ಮುಂತಾದ ವಿಷಯಗಳ ಕಲಿಕೆಗೆ ವಿಶೇಷಿಕರಣ ವ್ಯವಸ್ಥೆ ಕಲ್ಪಿಸಲಾಗಿದೆ.
ಮಾನವ ಸಂಪನ್ಮೂಲ ವ್ಯವಸ್ಥಾಪಕ, ಕಾರ್ಮಿಕ ಕಲ್ಯಾಣ ಅಧಿಕಾರಿ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಶಾಲಾ ಸಮಾಜ ಕಾರ್ಯಕರ್ತರಾಗಿ, ಆಪ್ತಸಮಾಲೋಚಕರಾಗಿ, ಅಭಿವೃದ್ಧಿ ಅಧಿಕಾರಿ, ಶಿಶು ಅಭಿವೃದ್ಧಿ ಅಧಿಕಾರಿ, ಕ್ಷೇತ್ರ ಅಧಿಕಾರಿ, ಆರೋಗ್ಯ ಶಿಕ್ಷಣಾಧಿಕಾರಿ, ವೈದ್ಯಕೀಯ ಸಮಾಜಕಾರ್ಯಕರ್ತರು, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು, ಮೇಲ್ವೀಚಾರಕರು, ಯೋಜನಾಧಿಕಾರಿ, ವ್ಯವಸ್ಥಾಪಕರು, ಸಾಮಾಜಿಕ ಅಭಿವೃದ್ಧಿ ಅಧಿಕಾರಿ, ಉಪನ್ಯಾಸಕರು, ಕಾರ್ಯಕ್ರಮ ಅಧಿಕಾರಿ ಸೇರಿ ಹಲವಾರು ಹುದ್ದೆಗಳು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಇದೆ. ಇಲ್ಲಿ ಮಹಿಳೆ, ಮಕ್ಕಳು ವೃದ್ಧರು, ಅಂಗವಿಕಲರು, ಅನಾಥರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ, ಕೈದಿಗಳ, ಬಾಲಾಪರಾದಿಗಳ, ಮಾನಸಿಕ ರೋಗಿಗಳ, ರೈತರ ಕಲ್ಯಾಣಕ್ಕೆ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಸಮಾಜ ಕಾರ್ಯ ಮನೋಭಾವ ಬೆಳಸಿ ಉತ್ತಮ ಪ್ರಜೆ ಮಾಡುವಲ್ಲಿ ಯಾವುದೇ ಸಂಶಯವಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಮಾನವೀಯ ವಿಷಯಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಎಲ್ಲರೂ ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂಬ ಆಶಯ ನಮ್ಮದು.
ಭೈರಪ್ಪ ಹಾಲಪ್ಪಗೋಳ
ಬಿ ಎಸ್ ಡಬ್ಲ್ಯು ಹಾಗೂ ಎಂ.ಎಸ್ ಡಬ್ಲ್ಯು
ಚಿನ್ನದ ಪದಕ ವಿಜೇತರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ